ಕಾಂಪಿಲ್ಯ

 ವೇದಗಳ ಕಾಲದಲ್ಲಿ ಪ್ರಮುಖ್ಯವಾಗಿದ್ದ ಪಂಗಡಗಳಲ್ಲೊಂದಾದ ಪಾಂಚಾಲ ರಾಜ್ಯದ ಮುಖ್ಯ ಪಟ್ಟಣ. ಪಾಂಚಾಲ ರಾಜ್ಯ ಈಗಿನ ಉತ್ತರ ಪ್ರದೇಶದ ಬರೈಲಿ, ಬುಡಾವುನ್ ಮತ್ತು ಫರೂಕಾಬಾದ್ ಜಿಲ್ಲೆಗಳಿಗೆ ಸೀಮಿತವಾಗಿತ್ತು. ಈ ರಾಜ್ಯಾಧಿಪತಿಗಳಾದ ಪಾಂಚಾಲರು ಋಗ್ವೇದದಲ್ಲಿ ಸೃಂಜಯ ಮತ್ತು ತುರ್ವಸ ಪಂಗಡಗಳೊಂದಿಗೆ ಹೆಸರಿಸಿರುವ ಕೃವಿ ಪಂಗಡಕ್ಕೆ ಸೇರಿದವರು. ಈ ಪಂಗಡದಲ್ಲಿ ದಿಗ್ವಿಜಯಾಕಾಂಕ್ಷಿಗಳಾದ ಅನೇಕ ರಾಜರು ಹುಟ್ಟಿ ಕುರುವಂಶದವರೊಂದಿಗೆ ಆಗಾಗ ಯುದ್ಧ ಅಥವಾ ಸಂಧಿಕಾರ್ಯಗಳಲ್ಲಿ ತೊಡಗಿರುತ್ತಿದ್ದರಲ್ಲದೇ ಸುಪ್ರಸಿದ್ಧರಾದ ಪ್ರವಹಣ, ಜೈವಲಿಯಂಥ ರಾಜರೂ ಶ್ವೇತಕೇತು, ಆರುಣಿಯಂಥ ಋಷಿ-ತತ್ತ್ವಶಾಸ್ತ್ರಜ್ಞÐರೂ ಕಂಡುಬಂದರು. ಕ್ರಮೇಣ ವಿದೇಹರಾಜ್ಯ ದೈವಜ್ಞ-ತತ್ತ್ವಶಾಸ್ತ್ರಜ್ಞರ ನೆಲೆವೀಡಾಗಿ ಪ್ರಬಲಿಸಿದಾಗ ಕಾಂಪಿಲ್ಯದ ಪ್ರಾಮುಖ್ಯ ಕಡಿಮೆಯಾಯಿತು.        

 (ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ